ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಕೂಡ ‘ಶಾಂಘೈ ಕನ್ನಡಿಗರ ಬಳಗವು’ ನವೆಂಬರ್ ೧ನೇ ತಾರೀಖು, ಭಾನುವಾರ ‘ಇಂಡಿಯನ್ ಕಿಚನ್ (ಮಿನ್ ಶೆಂಗ್ ರಸ್ತೆ)’ ಶಾಂಘೈದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಕರುನಾಡ ಸಂಭ್ರಮಾಚರಣೆಗೆ ಸುಮಾರು ೬೦ ಮಂದಿ ಕನ್ನಡಿಗರು ಶಾಂಘೈ ಹಾಗು ಹತ್ತಿರದ ನಗರಗಳಿಂದ ಬಂದು ಸೇರಿದ್ದರು. ಈ ಬಾರಿಯ ವಿಶೇಷವೆಂದರೆ, ತಮ್ಮ ವೈಯಕ್ತಿಕ ಕಾರಣಗಳಿಂದ ಈ ಕಾರ್ಯಕ್ರಮದಲ್ಲಿ ಉಪಸ್ಥಿತಲಾಗದವರಿಗಾಗಿ ಅಂತರ್ಜಾಲ ಸಭೆಯ ಮೂಲಕ ಭಾಗವಹಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು.

ಕುಮಾರಿ ದೀಪ್ತಿಯವರು ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ ಭಗವಂತನ ಕೃಪೆಯನ್ನು ಕಾರ್ಯಕ್ರಮಕ್ಕೆ ಕೋರಿದರು. ಶ್ರೀಮತಿ ಮೋಹಿನಿ ವಿಕಾಸ್ ಮತ್ತು ಶ್ರೀಮತಿ ರೀನಾ ಮಯೂರ್ ರವರು ಮಂಗಳೂರು ಹಾಗು ಉತ್ತರಕರ್ನಾಟಕ ಧಾಟಿಯಲ್ಲಿ ಮುಖ್ಯ ಅತಿಥಿಗಳಿಗೆ ಮತ್ತು ಸಭಿಕರಿಗೆ ಸ್ವಾಗತಿಸಿ, ಕನ್ನಡ ಭಾಷೆಯನ್ನು ಮಾತನಾಡಲು ಬಾರದವರಿಗೂ ಆಂಗ್ಲ ಭಾಷೆಯಲ್ಲಿ ಸ್ವಾಗತವನ್ನು ಕೋರಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಶ್ರೀ ಡಾ. ಜೆ. ಅರವಿಂದ್ (ಶಾಂಘೈನ ಭಾರತೀಯ ವಾಣಿಜ್ಯ ದೂತಾವಾಸ ಕಾರ್ಯಾಲಯದ ಮಧ್ಯಂತರ ಮುಖ್ಯಸ್ಥರು) ಹಾಗು ಶ್ರೀ ಅರುಣ್ ಕುಮಾರ್ ಪನ್ವಾರ್, ದೂತಾವಾಸ [ಮಾಧ್ಯಮ, ಪ್ರಸಾರಣ ಮತ್ತು ಸಾಂಸ್ಕೃತಿಕ] ತಮ್ಮ ಸಹಧರ್ಮಿಣಿಯೊಂದಿಗೆ ಪಾಲ್ಗೊಂಡಿದ್ದರು. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ನಮ್ಮ ಸಂಸ್ಕೃತಿಯಂತೆ ದೀಪವನ್ನು ಬೆಳಗಿ ಕಾರ್ಯಕ್ರಮಕ್ಕೆ ಶುಭಾರಂಭವನ್ನು ಮಾಡಿದರು. ವಿಶೇಷ ಆಹ್ವಾನಿತರಿಗೆ ನಾಡಿನ ಸಂಸ್ಕೃತಿಯಂತೆ ಹಾರ ಹಾಗು ರೇಷ್ಮೆ ಶಾಲನ್ನು ಹೊದಿಸಿ ಸನ್ಮಾನಿಸಲಾಯಿತು. ಶ್ರೀ ಅರವಿಂದ್ ರವರು ಈ ಸಂದರ್ಭದಲ್ಲಿ ಮಾತನಾಡಿ ಕನ್ನಡದಲ್ಲಿ ತಮ್ಮ ಅಭಿನಂದನೆಗಳನ್ನು ಸಭಿಕರಿಗೆ ತಿಳಿಸಿದರು.

ಈ ಸುಸಂದರ್ಭದಲ್ಲಿ ಶ್ರೀ ಅರುಣ್ ರವರು ‘https://shanghaikannadigaru.com/’ ಅಂತರ್ಜಾಲ ತಾಣವನ್ನು ಲೋಕಾರ್ಪಣೆ ಮಾಡಿದರು ಹಾಗು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮೆಲ್ಲರನ್ನು ಒಟ್ಟುಗೂಡಿಸುವಲ್ಲಿ ಹೇಗೆ ಬಹುಮುಖ್ಯಪಾತ್ರವಹಿಸುತ್ತವೆ ಎಂಬುದನ್ನು ಸಭಿಕರಿಗೆ ಮನದಟ್ಟುಮಾಡಿಕೊಟ್ಟರು. ಹಿರಿಯರಾದ ಶ್ರೀ ವಿಠ್ಠಲ್ ಮಲ್ಯರವರು ಅಂತರ್ಜಾಲ ತಾಣದ ಮುಖ್ಯ ಉದ್ದೇಶವನ್ನು ಸಭೆಯಲ್ಲಿ ಉಪಸ್ಥಿತರಿದ್ದವರಿಗೆ ತಿಳಿಸಿಕೊಟ್ಟರು.

ಶಾಂಘೈ ಕನ್ನಡಿಗರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಮನರಂಜಿಸಿದರು. ಶ್ರೀಮತಿ ಭಾರತಿ ಮತ್ತು ತಂಡದವರು ನಾಡಗೀತೆಯನ್ನು ಸುಮಧುರವಾಗಿ ಹಾಡಿ ಕನ್ನಡ ತಾಯಿಯ ಭಕ್ತಿಯ ಕಿಚ್ಚನ್ನು ಸಭಿಕರ ನರ ನಾಡಿಗಳಲ್ಲಿ ಹಚ್ಚಿದರು. ಪುಟಾಣಿ ಪ್ರಣವಿ ಮತ್ತು ಸುದಿತಿಯವರು ‘ಕೃಷ್ಣನ ನೃತ್ಯವನ್ನು’ ಮಾಡಿ ಪ್ರೇಕ್ಷಕರನ್ನು ಮನಸೂರೆಗೊಳಿಸಿದರು. ಶ್ರೀ ಚಂದ್ರಶೇಖರ ಸಿಂಹ ಹಾಗು ಕುಟುಂಬದವರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಮೂಕಸ್ಮಿತರನ್ನಾಗಿಸಿದವು. ಶ್ರೀ ಮಹೇಶ್, ಶ್ರೀ ವಿಠ್ಠಲ್ ಮಲ್ಯ ಹಾಗು ಶ್ರೀ ಗಂಗಾಧರ್ ರವರು ತಮ್ಮ ‘ಮೂಡಲ್ ಕುಣಿಗಲ್ ಕೆರೆ’ ಜನಪದ ಗೀತೆಯ ಮೂಲಕ ಸಭಿಕರನ್ನು ಕುಳಿತಲ್ಲಿಯೇ ಕುಣಿಯುವಂತೆ ಮಾಡಿದರು. ಶ್ರೀ ಸದಾಶಿವಸ್ವಾಮಿ, ಶ್ರೀ ವಿವೇಕ್ ಆಚಾರ್ ಹಾಗು ಶ್ರೀ ರವಿಶಂಕರ್ ರವರು ಪ್ರಸ್ತುತಪಡಿಸಿದ ‘ಪುಡೊಂಗ್ ಪುಂಡ್ರು’ ನಗೆ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಶ್ರೀ ಮಹೇಶ್ ರವರು ಮಕ್ಕಳಿಗಾಗಿಯೇ ವಿವಿಧ ಆಟಗಳನ್ನು ಆಡಿಸಿ ಅವರನ್ನು ಖುಷಿಪಡಿಸುವಲ್ಲಿ ಯಶಸ್ವಿಯಾದರು. ಶ್ರೀಮತಿ ಅಪರ್ಣ ಗೋಪಾಲ್ ಮತ್ತು ಶ್ರೀ ಸದಾಶಿವಸ್ವಾಮಿರವರು ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನಿರೂಪಿಸಿಕೊಟ್ಟರು ಹಾಗು ಅವರು ಕಾರ್ಯಕ್ರಮದಲ್ಲಿ ನಡೆಸಿದ ಪ್ರಶ್ನಾವಳಿಗಳು, ದಂಪತಿಗಳಿಗಾಗಿ ಆಟಗಳು, ಅದೃಷ್ಟ ಪರೀಕ್ಷೆಗಳು ಪ್ರೇಕ್ಷಕರ ಮನಸೂರೆಗೊಂಡವು, ಮಾತ್ರವಲ್ಲದೆ ವಿಜೇತರಿಗೆ ಸ್ಥಳದಲ್ಲಿಯೇ ಆಕರ್ಷಕ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಈ ವರ್ಷದ ಕಾರ್ಯಕ್ರಮ ತುಂಬಾ ಅಪರೂಪದ್ದಾಗಿದ್ದು, ನಮ್ಮ ಜೀವಮಾನದಲ್ಲಿ ಅವಿಸ್ಮರಣೀಯ ಪುಟವೊಂದನ್ನು ಸೇರಿಸಿದೆ. ಶಾಂಘೈ ಕನ್ನಡಿಗರ ಧ್ಯೇಯ ವಾಕ್ಯದಂತೆ ನಮ್ಮ ಕನ್ನಡ ನಾಡಿನ ಕಂಪನ್ನು ನುಡಿದು ಎಲ್ಲೆಡೆಗೆ ಹರಡುತ್ತಾ ಸಾಗುತ್ತಿರುವ ಎಲ್ಲ ಕನ್ನಡ ಬಾಂಧವರಿಗೆ ಕಾರ್ಯಕ್ರಮದ ಮೆರಗನ್ನು ಇಮ್ಮಡಿಗೊಳಿಸದ್ದಕ್ಕಾಗಿ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಬರುವ ದಿನಗಳು ಹರ್ಷಭರಿತವಾಗಲಿ ಎಂದು ಆಶಿಸಲಾಯಿತು. 

ಕಾರ್ಯಕ್ರಮಕ್ಕೆ ಬಿಡುವುಮಾಡಿಕೊಂಡು ಬಂದ ಕಾನ್ಸುಲೇಟ್ ಅಧಿಕಾರಿಗಳಾದ ಡಾ. ಅರವಿಂದ್ ಹಾಗು ಶ್ರೀ ಅರುಣ್ ಪನ್ವಾರ್ ಅವರಿಗೆ ಶಾಂಘೈ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಕೋರಲಾಯಿತು.  ಡಾ. ಅರವಿಂದ್, ಶ್ರೀ ಅರುಣ್ ಪನ್ವಾರ್ ಮತ್ತು ಎಲ್ಲಾ ಕಾನ್ಸುಲೇಟ್ ಅಧಿಕಾರಿಗಳು ಈ COVID-19 ಕಷ್ಟದ ಸಮಯದಲ್ಲಿ ಶಾಂಘೈನ ಸಹ ನಾಗರಿಕರಿಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಲಿದ್ದಾರೆ. ಶಾಂಘೈ ಕನ್ನಡಿಗರ ಪರವಾಗಿ ಅವರ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಿಲಾಯಿತು ಮತ್ತು ಪ್ರತಿ ಸನ್ನಿವೇಶದಲ್ಲೂ ಅವರು ನೀಡಿದ ಸಂಪೂರ್ಣ ಬೆಂಬಲವನ್ನು ಸ್ಮರಿಸಿ ವಂದಿಸಲಾಯಿತು.

ಶಾಂಘೈ ಬಳಗದ ಮುಂದಾಳಾದ ಶ್ರೀ ಸಂದೀಪಶಾಸ್ತ್ರೀ ಕಾಶೀಕರ್ ರವರು ವಿಶೇಷ ಆಹ್ವಾನಿತರಿಗೆ, ಪ್ರೇಕ್ಷಕರಿಗೆ ವಂದನಾರ್ಪಣೆಯನ್ನು ಮಾಡಿ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ತೆರೆಮರೆಯಲ್ಲಿ ಶ್ರಮಿಸಿದ ಶ್ರೀ ಗಿರೀಶ್ ಬದ್ದೂರ್, ಶ್ರೀ ರೂಪೇಶ್, ಶ್ರೀ ಸಚಿನ್, ಶ್ರೀ ಸತೀಶ್, ಶ್ರೀ ಸುನಿಲ್, ಶ್ರೀ ಅರವಿಂದ್, ಶ್ರೀ ವಿವೇಕ್, ಶ್ರೀ ವಿಕಾಸ್ ಮತ್ತು ಎಲ್ಲ ಸ್ವಯಂಸೇವಕರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಬಹುಮುಖ್ಯವಾಗಿ ಈ ಕಾರ್ಯಕ್ರಮಕ್ಕೆ ತಮ್ಮ ಉದಾರ ಹಸ್ತದಿಂದ ಪ್ರೋತ್ಸಾಯಿಸಿದ ಪ್ರಾಯೋಜಕರಾದ ಶ್ರೀಮತಿ ಕಮಲ ಲತಾ ಹಾಗು ಶ್ರೀ ನೂರುಲ್ಲ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೆಯೆ ತುಂಬಾ ರುಚಿಯಾಗಿ ಮತ್ತು ಶುಚಿಯಾಗಿ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗು ಸ್ಥಳದ ವ್ಯವಸೆಯನ್ನು ಮಾಡಿಕೊಟ್ಟ ‘ಇಂಡಿಯನ್ ಕಿಚನ್’ನ ವ್ಯವಸ್ಥಾಪಕರಾದಂತ ಶ್ರೀ ಕಣ್ಣನ್ ರವರಿಗೆ ಶಾಂಘೈ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಕೊನೆಯದಾಗಿ ಶಾಂಘೈ ಕನ್ನಡ ಬಳಗದ ಸಾಮೂಹಿಕ ಛಾಯಾಚಿತ್ರವನ್ನು ಸೆರೆಹಿಡಿಯಲಾಯಿತು ಹಾಗು ಉತ್ಸಾಹಭರಿತ ಸಭಿಕರು ಸ್ವಯಂಪ್ರೇರಿತರಾಗಿ ವೇದಿಕೆಗೆ ಬಂದು ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವನ್ನು ಮಾಡಿಕೊಡಲಾಯಿತು. ತದನಂತರ ಕಾರ್ಯಕರ್ತರ ಸಂಯೋಜನೆ ಮತ್ತು ಸಹಕಾರವನ್ನು ಪ್ರೋತ್ಸಾಯಿಸಿ ಕಾರ್ಯಕ್ರಮಕ್ಕೆ ತೆರೆಯೆಳೆಯಲಾಯಿತು.

_________________________________________________________

Author: Sadashivaswamy on behalf of Shanghai Kannadigaru


RELATED ITEMS: KANNADA, KANNADIGA, CHINA, SHANGHAI, SHANGHAIKANNADIGARU

Leave a comment

Your email address will not be published. Required fields are marked *